ರಾಜಕಾಲುವೆ-RAJA KALUVE – A PRESS REPORT IN PRAJA VANI


ರಾಜಕಾಲುವೆ

ಗ್ರಾಮನಕ್ಷೆ ಮರೆತರು; ‘ಕಾಲುವೆಯಲ್ಲಿ ಬಿದ್ದರು!

ನಗರದ ತುಂಬಾ ಈಗ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯದ್ದೇ ದೊಡ್ಡ ಸುದ್ದಿ. ರಾಜಕಾಲುವೆ ಮೇಲೆ ಬುಲ್ಡೋಜರ್‌ಗಳ ಸದ್ದುಮೊಳಗಿದಂತೆ  ಮನೆಗಳು ಒಂದೊಂದಾಗಿ ಧರೆಗೆ ಉರುಳುತ್ತಿವೆ. ಬೃಹತ್‌ ನೀರುಗಾಲುವೆ  ಸಮಾಧಿಯ ಮೇಲೆ ಈ ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದ್ದು ಹೇಗೆ? ಅದರ ಪರಿಣಾಮಗಳು ಏನು? ವ್ಯವಸ್ಥೆ ದಾರಿ ತಪ್ಪಿದ್ದು ಎಲ್ಲಿ? – ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಈ ಸಮೀಕ್ಷೆಯಲ್ಲಿದೆ.

ಬೆಂಗಳೂರು: ನಗರದ ಕೋಡಿಚಿಕ್ಕನಹಳ್ಳಿ, ಹರಲೂರು, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ ಮತ್ತಿತರ ಕಡೆಗಳಲ್ಲೀಗ ರಾಜಕಾಲುವೆ ದಂಡೆಯ ಮೇಲೆ ಬುಲ್ಡೋಜರ್‌ಗಳ ಸದ್ದು ಜೋರಾಗಿದ್ದರೆ, ಭಗ್ನಾವಶೇಷಗಳ ರಾಶಿಯೇ ಬಿದ್ದಿದೆ.

ಗುಬ್ಬಚ್ಚಿಯೊಂದು ಎಲ್ಲಿಂದಲೋ ಒಂದೊಂದಾಗಿ ಗಿಡದ ಎಳೆಯನ್ನು ತಂದು ಗೂಡು ಕಟ್ಟುವಂತೆ ಜೀವಮಾನದ ಉಳಿತಾಯದ ಜತೆಗೆ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಹಣವನ್ನೂ ಹಾಕಿ, ಕಟ್ಟಿದ್ದ ಕನಸಿನ ಮನೆಗಳು ತರಗೆಲೆಗಳಂತೆ ಧರೆಗುರುಳಿವೆ.

ಜೆಸಿಬಿಗಳು ತಮ್ಮ ಉದ್ದನೆಯ ಮೂತಿಯಿಂದ ಕಟ್ಟಡಗಳನ್ನು ಧರೆಗೆ ಉರುಳಿಸುವುದು, ಜೀವ ತೇಯ್ದು ಅವುಗಳನ್ನು ಕಟ್ಟಿದವರು ಮುಂದೆ ನಿಂತು ಕಣ್ಣೀರು ಸುರಿಸುವುದು, ಮನೆಯೊಳಗಿನ ಸಾಮಾನುಗಳು ಹಾಳಾಗದಂತೆ ಸಂರಕ್ಷಿಸಲು ತುಸು ಕಾಲಾವಕಾಶಕ್ಕಾಗಿ ಅಂಗಲಾಚುವುದು… ಎಲ್ಲವೂ ಕರುಳು ಹಿಂಡುವಂತಹ ಸನ್ನಿವೇಶಗಳು.

ಬಿಬಿಎಂಪಿಯಿಂದಲೇ ಪಡೆದ ಅಧಿಕೃತ ದಾಖಲೆಗಳನ್ನು ತೋರಿಸಿ, ಅಧಿಕಾರಿಗಳ ಜತೆ ವಾಗ್ವಾದ ನಡೆಸುತ್ತಾ ಮನೆ ಉಳಿಸಿಕೊಳ್ಳುವ ಕೊನೆಯ ಕ್ಷಣದ ಯತ್ನ ನಡೆಸಿದವರ ಸಂಖ್ಯೆ ದೊಡ್ಡದಿದೆ. ಆದರೆ, ಅಬ್ಬರಿಸುವ ಜೆಸಿಬಿಗಳಿಗೆ ಕಟ್ಟಡಗಳು ಮಾತ್ರ ಕಾಣುತ್ತಿವೆ.

ಅವನಿ ಶೃಂಗೇರಿನಗರದ ಚಹಾ ಅಂಗಡಿ ಮಾಲೀಕ ಪ್ರದೀಪ್‌ ರಾವ್‌ ಅವರ ವಿಷಯದಲ್ಲೂ ಹೀಗೇ ಆಗಿದೆ. ಅವರು ಬಿಬಿಎಂಪಿಯಿಂದ ಪಡೆದಿದ್ದ ಖಾತಾ, ನಕ್ಷೆ, ತೆರಿಗೆ ಕಟ್ಟಿದ ರಸೀದಿ ಹಿಡಿದುಕೊಂಡು ನಿಂತಿದ್ದರೆ, 15 ವರ್ಷಗಳ ಹಿಂದೆ ಕಟ್ಟಿದ್ದ ಮನೆ ಅವರ ಕಣ್ಣೆದುರಿಗೇ ಉರುಳಿಬೀಳುತ್ತಿತ್ತು. ಅದೇ ದಿನ ಹರಲೂರು ರಸ್ತೆಯ ಶುಭ ಎನ್‌ಕ್ಲೇವ್‌ನಲ್ಲಿ ಹತ್ತು ಮನೆಗಳನ್ನು ಬುಲ್ಡೋಜರ್‌ಗಳು ಧ್ವಂಸಗೊಳಿಸಿದವು.  ‘ಕಸವನಹಳ್ಳಿ ಮತ್ತು ಕೈಕೊಂಡ್ರಹಳ್ಳಿ ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಮೇಲೇ ಶುಭ ಎನ್‌ಕ್ಲೇವ್‌ ಬಡಾವಣೆ ನಿರ್ಮಾಣವಾಗಿದೆಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ: ಬಿಬಿಎಂಪಿ ತಾನೇ ಖಾತಾ, ನಕ್ಷೆ ಸೇರಿದಂತೆ ಎಲ್ಲ ಅಧಿಕೃತ ದಾಖಲೆ ನೀಡಿದ ಆಸ್ತಿಗಳನ್ನು ತೆರವುಗೊಳಿಸಲು ಮುಂದಾಗಿದ್ದು ಏಕೆಎಂಬುದು. ಹಾಗಾದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಜಾಗದಲ್ಲಿ ಮನೆ ಕಟ್ಟಲು ಸಾಲ ನೀಡಿದ್ದು ಯಾವ ಆಧಾರದ ಮೇಲೆಎಂಬ ಪ್ರಶ್ನೆಯೂ ಅಲ್ಲಿ ಪ್ರತಿಧ್ವನಿಸುತ್ತಿತ್ತು.

ಅವನಿ ಶೃಂಗೇರಿನಗರದ ಪ್ರದೀಪ್‌ ಅವರಂತೆಯೇ ಶುಭ ಎನ್‌ಕ್ಲೇವ್‌ನ ಮಹೇಂದ್ರ ಕುಮಾರ್‌ ಅವರ ಬಳಿಯೂ ಆಸ್ತಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳಿದ್ದವು. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಇತರರಂತೆ ಈ ಇಬ್ಬರೂ ಬಿಬಿಎಂಪಿ ಕೊಟ್ಟಿದ್ದ ಖಾತಾ ಹಾಗೂ ಬಿಡಿಎ ಮಂಜೂರು ಮಾಡಿದ್ದ ನಕ್ಷೆ ಪ್ರದರ್ಶಿಸುತ್ತಿದ್ದರು.

ನಾವು ಮನೆ ಕಟ್ಟುವಾಗ ನಿವೇಶನ ರಾಜಕಾಲುವೆ ಮೇಲಿದೆ ಎಂಬುದು ನಮಗೆ ತಿಳಿದಿರಲಿಲ್ಲ. ನಮಗೆ ಅಧಿಕೃತ ದಾಖಲೆಗಳು ಸಿಕ್ಕ ಬಳಿಕ ಅದರ ಆಧಾರದ ಮೇಲೆ ಆಂಧ್ರ ಬ್ಯಾಂಕ್‌ನಿಂದ ಸಾಲ ಪಡೆದವು. ಇನ್ನೂ ₹ 4 ಲಕ್ಷ ತುಂಬುವುದು ಬಾಕಿ ಇದೆಎನ್ನುತ್ತಾರೆ ಪ್ರದೀಪ್‌.

ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಸಮೀಕ್ಷೆ ಮಾಡಲು ಬಂದಿದ್ದರು. ನಮ್ಮ ಮನೆ ಇರುವ ಜಾಗದಲ್ಲಿ ಕಾಲುವೆ ಬರುವುದಿಲ್ಲ ಎಂಬ ಸಂಗತಿಯನ್ನು ಖಚಿತಪಡಿಸಿದ್ದರು. ಹೀಗಾಗಿ ನಾವು ನಿರಾಳರಾಗಿದ್ದೆವುಎಂದು ಅವರು ಹೇಳುತ್ತಾರೆ.

ಶುಭ ಎನ್‌ಕ್ಲೇವ್‌ನಲ್ಲಿ ಮನೆ ಕಟ್ಟಿದ ಬಹುತೇಕರಿಗೆ ಆ ಪ್ರದೇಶ ರಾಜಕಾಲುವೆ ಮೇಲಿದೆ ಎಂಬುದು ಗೊತ್ತಿದೆ. ಬಿಬಿಎಂಪಿ ಅಧಿಕಾರಿಗಳು ಆ ಭಾಗದಲ್ಲಿ ಆರು ವರ್ಷಗಳ ಹಿಂದೆ ಒಮ್ಮೆ ರಾಜಕಾಲುವೆ ಸಮೀಕ್ಷೆ ನಡೆಸಿದ್ದರು. ಆಗ ಕಾಲುವೆ ಮಾರ್ಗ ಎಲ್ಲಿದೆ ಎಂಬುದನ್ನು ಗುರುತು ಹಾಕಲಾಗಿತ್ತು.

ಈ ಹಿಂದೆ ನಾವು ಬುಲ್ಡೋಜರ್‌ಗಳ ಜತೆ ಬರುವ ಸೂಚನೆ ಸಿಗುತ್ತಿದ್ದಂತೆ ಅಲ್ಲಿನ ಮನೆಗಳ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. 2010ರಲ್ಲಿ ಸಮೀಕ್ಷೆ ನಡೆಸುವುದಕ್ಕಿಂತ ಮುಂಚೆ ಈ ಭಾಗದಲ್ಲಿ ನೆಲೆಸಿದ್ದ ಎಲ್ಲರಿಗೂ ಅದು ರಾಜಕಾಲುವೆ ಎಂಬುದು ತಿಳಿದಿರಲಿಕ್ಕಿಲ್ಲ. ಆದರೆ, ಆ ಬಳಿಕ ಆಸ್ತಿ ಖರೀದಿಸಿದ ಪ್ರತಿಯೊಬ್ಬರಿಗೂ ಅದರ ಸ್ಪಷ್ಟ ಚಿತ್ರಣವಿದೆ. ಹೀಗಿದ್ದೂ ಜಾಣ ಕುರುಡು ಪ್ರದರ್ಶಿಸುತ್ತಾರೆಎಂದು ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ಕೈಕೊಂಡ್ರಹಳ್ಳಿ ಹಾಗೂ ಕಸವನಹಳ್ಳಿ ಕೆರೆಗಳ ಮಧ್ಯೆ ಕಾಣೆಯಾದ ರಾಜಕಾಲುವೆ ಸಂಬಂಧ ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯು ಉಪ ಲೋಕಾಯುಕ್ತರಿಗೆ ದೂರು ನೀಡಿತ್ತು. ಈ ಸಂಗತಿ ಎಲ್ಲರ ಗಮನದಲ್ಲಿದೆ ಎಂದು ಅವರು ಹೇಳುತ್ತಾರೆ.

ರಾಜಕಾಲುವೆ ಮೇಲೆ ಮನೆ ಕಟ್ಟಿದ ಜನರಿಗೆ ಅಧಿಕೃತ ದಾಖಲೆಗಳು ಸಿಗುವುದಾದರೂ ಹೇಗೆ? ಎಲ್ಲಿ, ಯಾವ ರೀತಿ ತಪ್ಪಾಗುತ್ತಿದೆ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಬೆನ್ನು ಹತ್ತಿದರೆ ವ್ಯವಸ್ಥೆಯಲ್ಲಿ ಇರುವ ಲೋಪಗಳು ಒಂದೊಂದಾಗಿ ಬಯಲಾಗುತ್ತಾ ಹೋಗುತ್ತವೆ.

ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯ ಸ್ಥಾಪಕ ಟ್ರಸ್ಟಿ ಹಾಗೂ ಕೈಕೊಂಡ್ರಹಳ್ಳಿ ಪ್ರದೇಶದ ನಿವಾಸಿ ಪ್ರಿಯಾ ರಾಮಸುಬ್ಬಣ್ಣ ಅವರ ಅನುಭವವನ್ನೇ ಕೇಳಿ. 2002ರಲ್ಲಿ ಅವರು ಕೈಕೊಂಡ್ರಹಳ್ಳಿ ಕೆರೆ ಹತ್ತಿರದಲ್ಲಿ ನಿವೇಶನವೊಂದನ್ನು ಖರೀದಿಸಲು ಉದ್ದೇಶಿಸಿದ್ದರು. ಅಲ್ಲಿನ ನಿವೇಶನಗಳಿಗೆ ಸರಿಯಾದ ದಾಖಲೆಗಳು ಇರಲಿಲ್ಲ.

ಮಾರಾಟದ ಹೊಣೆ ಹೊತ್ತಿದ್ದ ಏಜೆಂಟರು ಹಾಗೂ ವಕೀಲರು ದಾಖಲೆಗಳನ್ನೆಲ್ಲ ಸರಿಪಡಿಸಿ ಕೊಡುತ್ತೇವೆ, ನೀವು ನಿವೇಶನ ಒಪ್ಪಿಕೊಳ್ಳಿ ಎಂದು ಅವರ ದುಂಬಾಲು ಬಿದ್ದಿದ್ದರಂತೆ.

ನಿವೇಶನ ತುಂಬಾ ಕಡಿಮೆ ಬೆಲೆಗೆ ಸಿಗಲಿದೆ. ಒಂದಿಷ್ಟು ಲಂಚ ಕೊಟ್ಟರೆ ಅಧಿಕೃತ ದಾಖಲೆಗಳೂ ಸಿಗುತ್ತವೆ ಎಂಬ ಆಮಿಷ ಒಡ್ಡಲಾಗಿತ್ತು. ಆದರೆ, ನಾನು ಒಪ್ಪಲಿಲ್ಲ. ಕೆಲವು ಬಿಲ್ಡರ್‌ಗಳು ತಾವೇ ಮುಂದೆ ನಿಂತು ಖರೀದಿದಾರರಿಗೆ ದಾಖಲೆ ಕೊಡಿಸಿದರೆ, ಅಧಿಕೃತ ದಾಖಲೆಗಳು ಸಿಗುತ್ತವೆ ಎಂಬ ಆಸೆಯಲ್ಲಿ ಖರೀದಿಸಿ ಕೈಸುಟ್ಟುಕೊಂಡವರು ನೇರವಾಗಿ ಅಧಿಕಾರಿಗಳ ಬಳಿ ಹೋಗಿ ದುಡ್ಡು ಕೊಟ್ಟು ದಾಖಲೆ ಪಡೆದ ಉದಾಹರಣೆಗಳೂ ಇವೆಎಂದು ಅವರು ಬೆಳಕು ಚೆಲ್ಲುತ್ತಾರೆ. ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಒಬ್ಬರು ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಲಂಚಕೊಟ್ಟು ದಾಖಲೆ ಪಡೆದ ಪ್ರಕರಣಗಳು ಲೆಕ್ಕವಿಲ್ಲದಷ್ಟಿವೆ. ಅಂತಹ ದಾಖಲೆಗಳು ನಕಲಿ ಆಗಿರುವ ಸಾಧ್ಯತೆಯೂ ಇದೆಎಂದು ಅವರು ಹೇಳುತ್ತಾರೆ.

ಆ ಎಂಜಿನಿಯರ್‌ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ತಮ್ಮ ಅನುಭವವನ್ನೇ ಉದಾಹರಣೆಯಾಗಿ ಕೊಡುತ್ತಾರೆ. ನಗರದ ಅರ್ಧದಷ್ಟು ಆಸ್ತಿಗಳ ದಾಖಲೆಗಳಿಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಗೊಂದಲ ಇದೆ ಎಂಬುದು ಗೊತ್ತಿತ್ತು. ನಾನು ಸುಮಾರು 50 ಮನೆಗಳನ್ನು ನೋಡಿದೆ. ಅಧಿಕೃತ ದಾಖಲೆಗಳ ಸಮಸ್ಯೆ ಎಲ್ಲೆಡೆಯೂ ಕಂಡುಬಂತು. ಈ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಕಾನೂನಿನಲ್ಲಿ ಉಳಿದಿರುವ ದೋಷಗಳು ರಾಜಕಾಲುವೆ ಮೇಲೂ ಮನೆ ಕಟ್ಟುವಂತೆ ಹಲವರನ್ನು ಪ್ರೇರೇಪಿಸಿವೆಎನ್ನುತ್ತಾರೆ ಅವರು.

ಯಾವುದೇ ವ್ಯಕ್ತಿ ಆಸ್ತಿಯೊಂದನ್ನು ಖರೀದಿಸಬೇಕಾದರೆ ಬಿಡಿಎಯಿಂದ ಆ ನಿವೇಶನಕ್ಕೆ ಮಂಜೂರಾತಿ ಸಿಕ್ಕಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ಯಾವುದೇ ಬಡಾವಣೆಗೆ ಮಾಸ್ಟರ್‌ ಪ್ಲ್ಯಾನ್‌ ಆಧಾರದ ಮೇಲೆ ಬಿಡಿಎ ಮಂಜೂರಾತಿ ನೀಡುತ್ತದೆ. ಖರೀದಿಗೆ ಉದ್ದೇಶಿಸಿರುವ ಭೂಮಿ ರಾಜಕಾಲುವೆ ಮೇಲಿದೆಯೇ, ಇಲ್ಲವೇ ಎಂಬುದು ಮಾಸ್ಟರ್‌ ಪ್ಲ್ಯಾನ್‌ ಹೇಗೆ ಸಿದ್ಧಪಡಿಸಲಾಗಿದೆ ಎಂಬುದರ ಮೇಲೆ ಅವಲಂಬನೆ ಆಗಿರುತ್ತದೆ.

ಮಾಸ್ಟರ್‌ ಪ್ಲ್ಯಾನ್‌ ಮತ್ತು ಗ್ರಾಮ ನಕ್ಷೆ ಸಿದ್ಧಪಡಿಸುವ ಕ್ರಮ ಭಿನ್ನವಾಗಿದೆ. ಗ್ರಾಮ ನಕ್ಷೆಯಲ್ಲಿ ರಾಜಕಾಲುವೆ ಮಾರ್ಗಗಳನ್ನು ಸ್ಪಷ್ಟವಾಗಿ ಗುರ್ತಿಸಲಾಗಿರುತ್ತದೆ. ಆದರೆ, ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಅದನ್ನು ಗುರ್ತಿಸದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಡಾವಣೆ ನಿರ್ಮಾಣಕ್ಕೆ ಮಂಜೂರಾತಿ ನೀಡುವಾಗ ಗ್ರಾಮ ನಕ್ಷೆಯನ್ನು ನೋಡದಿರುವುದೇ ಈಗಿನ ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ. ಬಿಬಿಎಂಪಿ ಸಹ ಖಾತಾ ಮಾಡಿಕೊಡುವಾಗ ಇಲ್ಲವೆ ನಕ್ಷೆಗೆ ಮಂಜೂರಾತಿ ನೀಡುವಾಗ ನಿವೇಶನದ ವಿವರವನ್ನು ಗ್ರಾಮ ನಕ್ಷೆಯೊಂದಿಗೆ ತುಲನೆ ಮಾಡಿ ನೋಡುವುದಿಲ್ಲ. ತಪ್ಪನ್ನು ತಡೆಯುವ ಮತ್ತೊಂದು ಅವಕಾಶವೂ ಈ ಹಂತದಲ್ಲಿ ಕೈತಪ್ಪುತ್ತದೆ.

ಯೋಜನೆಗೆ ಮಂಜೂರಾತಿ ನೀಡಲು ಭೂಪರಿವರ್ತನೆ, ಭೂಬಳಕೆ ಬದಲಾವಣೆ, ಕಂದಾಯ ನಕ್ಷೆ, ಖರೀದಿ ಪತ್ರ ಮತ್ತಿತರ ದಾಖಲೆಗಳು ಬೇಕು ಎಂದು ಬಿಬಿಎಂಪಿ ವೆಬ್‌ಸೈಟ್‌ನ ಒಂದು ಕಡೆ ವಿವರಣೆಯಿದೆ. ಆದರೆ, ಅದೇ ವೆಬ್‌ಸೈಟ್‌ನ ಖಾತೆ ನೋಂದಣಿ ಪ್ರಕ್ರಿಯೆಯ ಹಂತ, ಹಂತದ ವಿವರಣೆ ಒದಗಿಸುವ ಪ್ರಶ್ನೋತ್ತರದಲ್ಲಿ ಅಧಿಕೃತ ದಾಖಲೆಗಳ ಸಂಬಂಧದ ಈ ಮಾಹಿತಿಯೇ ಇಲ್ಲ. ದುಡ್ಡು ಖರ್ಚು ಮಾಡಲು ಸಿದ್ಧವಾಗಿದ್ದರೆ ಮಂಜೂರಾತಿ ಪತ್ರ ಪಡೆಯುವುದು ಸುಲಭ ಎನ್ನುವುದು ಮನೆ ಕಟ್ಟಲು ಹೊರಟವರು, ಅದಕ್ಕೆ ಸಹಾಯ ಮಾಡಲು ಸಿದ್ಧವಾದ ಎಂಜಿನಿಯರ್‌ಗಳು, ಮೊಹರು ಒತ್ತಿ, ಸಹಿ ಮಾಡಲು ಸನ್ನದ್ಧರಾಗಿ ಕುಳಿತ ಅಧಿಕಾರಿಗಳು ಎಲ್ಲರಿಗೂ ಗೊತ್ತು.

ಸರ್ವೇ ಇಲಾಖೆಯಿಂದ ನೀಡಲಾಗುವ ದಾಖಲೆಯೇ ಕಂದಾಯ ನಕ್ಷೆ (ಟಿಪ್ಪಣಿ). ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳ ಅನುಸಾರವಾಗಿ ಟಿಪ್ಪಣಿಯಲ್ಲಿನ ನಕ್ಷೆಯನ್ನು ಸಿದ್ಧಪಡಿಸಲಾಗಿರುತ್ತದೆ. ಕಟ್ಟಡ ನಕ್ಷೆಗೆ ಮಂಜೂರಾತಿ ನೀಡುವ ಮುನ್ನ ನಿವೇಶನಕ್ಕೆ ಸಂಬಂಧಿಸಿದ ಟಿಪ್ಪಣಿ ಪರಿಶೀಲಿಸಿದರೆ ಒತ್ತುವರಿಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿದೆ. ಏಕೆಂದರೆ, ಕಂದಾಯ ನಕ್ಷೆಯಲ್ಲಿ ಅರಣ್ಯ, ನಾಲಾ, ಮೀಸಲು ಪ್ರದೇಶ ಎಲ್ಲವನ್ನೂ ಸ್ಪಷ್ಟವಾಗಿ ಗುರ್ತಿಸಲಾಗಿರುತ್ತದೆ. ಆದರೆ, ನಕ್ಷೆ ಮಂಜೂರು ಮಾಡುವಾಗ ಬಿಬಿಎಂಪಿ ಅಧಿಕಾರಿಗಳು ಈ ಟಿಪ್ಪಣಿಯನ್ನೇ ನೋಡುವುದಿಲ್ಲ ಎಂಬ ಆರೋಪವಿದೆ.

ಕಂದಾಯ ಇಲಾಖೆಯಿಂದ 1900 ಹಾಗೂ 1960ರ ದಶಕದಲ್ಲಿ ತಯಾರಿಸಿದ ಗ್ರಾಮನಕ್ಷೆ ಹಾಗೂ ಬಿಡಿಎ ಮಾಸ್ಟರ್‌ ಪ್ಲ್ಯಾನ್‌ ಎರಡನ್ನೂ ನೋಡಿದ್ದರೆ ಈಗಿನ ಸನ್ನಿವೇಶ ತುಂಬಾ ಭಿನ್ನವಾಗಿರುತ್ತಿತ್ತು. ಬಿಡಿಎಯ ಮಾಸ್ಟರ್‌ ಪ್ಲ್ಯಾನ್‌ನ ನಕ್ಷೆಗಳು, ಬೈಲಾಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿವೆ. ಆದರೆ, ನಕ್ಷೆ ಮಂಜೂರು ಮಾಡುವಾಗ ಅಗತ್ಯ ದಾಖಲೆಗಳನ್ನು ಪಡೆದು ತುಲನೆ ಮಾಡಿ ನೋಡುವುದನ್ನೇ ಬಿಟ್ಟುಕೊಡಲಾಗಿದೆ. ಅಲ್ಲದೆ, ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿಲ್ಲ. ನಕ್ಷೆ ಮಂಜೂರು ಮಾಡಲಾದ ಕಡತಗಳನ್ನೆಲ್ಲ ಪರಿಶೀಲಿಸುತ್ತಾ ಹೋದರೆ ಈ ಸತ್ಯ ಗೊತ್ತಾಗುತ್ತದೆ.

ನೆಲದ ಕಾನೂನನ್ನು ಕಡೆಗಣಿಸಿ ನಕ್ಷೆ ಮಂಜೂರು ಮಾಡಿದ್ದು ಬಿಬಿಎಂಪಿ ಹಾಗೂ ಅಲ್ಲಿನ ಅಧಿಕಾರಿಗಳ ಪ್ರಮಾದ. ಸರ್ಕಾರ ಕೂಡ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲಎನ್ನುತ್ತಾರೆ ಪ್ರಿಯಾ. ರಾಜಕಾಲುವೆ ಒತ್ತುವರಿ ಪ್ರಕರಣಗಳ ಆಳಕ್ಕೆ ಕೈಹಾಕಿದಷ್ಟೂ ಸರ್ಕಾರಿ ಸಂಸ್ಥೆಗಳ ಸುತ್ತಲೇ ಅದರ ರಾಡಿ ಹರಿಯುತ್ತದೆ. ಆಸ್ತಿ ಖರೀದಿ ಮಾಡಿದವರು ಇದರ ಕೇಂದ್ರಬಿಂದುವಾದರೂ ಅಧಿಕಾರಿಗಳು, ಡೆವಲಪರ್‌ ಗಳು, ಖರೀದಿದಾರರು ಎಲ್ಲರ ಪಾತ್ರವೂ ಈ ಹಗರಣದಲ್ಲಿದೆ.

ಕಾಂಕ್ರಿಟ್ ಕೆಲಸ ಶುರು
ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಪ್ರದೇಶದಲ್ಲಿ ಬಿಬಿಎಂಪಿ, ರಾಜಕಾಲುವೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಕೋಡಿಚಿಕ್ಕನಹಳ್ಳಿಯ ಅವನಿಶೃಂಗೇರಿ ನಗರದಲ್ಲಿ ಕಾಲುವೆ ಕೆಲಸ ಶುರು ಮಾಡಿದ್ದುಬುಧವಾರ  ಕಾಂಕ್ರಿಟ್‌ ಹಾಕಲಾಯಿತು. ಈ ಕಾಲುವೆಯು ಮುಖ್ಯ ಕಾಲುವೆಯ ಮೂಲಕ ಹುಳಿಮಾವು ಕೆರೆಯನ್ನು ಸಂಪರ್ಕಿಸುತ್ತದೆ.

ಆಕ್ಟೊಪಸ್‌ಯಂತ್ರ  ಬಳಕೆ
ಈ ನಡುವೆ, ‘ಆಕ್ಟೊಪಸ್ಎಂಬ ಅತ್ಯಾಧುನಿಕ ಯಂತ್ರದ ಮೂಲಕ  ರಾಜಕಾಲುವೆ ಹೂಳನ್ನು ಎತ್ತಲು ಕಂಪೆನಿಯೊಂದು ಮುಂದೆ ಬಂದಿದೆ. ಈ ಯಂತ್ರದ ಕಾರ್ಯವೈಖರಿ ಕುರಿತು ಕಂಪೆನಿಯು ಡಾಲರ್ಸ್‍ ಕಾಲೊನಿ ಸಮೀಪದ ಆರ್‍ಎಂವಿ ಬಡಾವಣೆಯಲ್ಲಿ ಗುರುವಾರ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರನ್ನು ಸಂಪರ್ಕಿಸಿದೆ.

ಆಕ್ಟೊಪಸ್ಕಾರ್ಯ ಸರಿ ಹೊಂದಿದರೆ, ಅದನ್ನು ಖರೀದಿಸುವ ಅಥವಾ ಅದನ್ನು ಬಾಡಿಗೆಗೆ ಪಡೆಯುವ ಕುರಿತು ಚಿಂತನೆ ನಡೆಸಲಾಗುವುದುಎಂದು ಬಿಬಿಎಂಪಿ ಎಂಜಿನಿಯರ್‌ರೊಬ್ಬರು ತಿಳಿಸಿದರು.

ಭಗ್ನಾವಶೇಷಗಳಲ್ಲಿ ಒಬ್ಬ ಅದೃಷ್ಟವಂತ!
ಶುಭ ಎನ್‌ಕ್ಲೇವ್‌ನಲ್ಲಿ ಇತ್ತೀಚೆಗೆ ನೆಲಸಮ ಮಾಡಲಾದ ಮನೆಗಳಲ್ಲಿ ಮೈಕೆಲ್‌ ರುತ್‌ಸ್ವಾಮಿ ಅವರ ಮನೆ ಸಹ ಸೇರಿತ್ತು. ಆದರೆ, ಅದೃಷ್ಟವಂತರಾದ ಮೈಕೆಲ್‌ ಕೆಲವೇ ತಿಂಗಳುಗಳ ಹಿಂದೆ ಆ ಮನೆಯನ್ನು ಬಿಲ್ಡರ್‌ ಒಬ್ಬರಿಗೆ ಮಾರಾಟ ಮಾಡಿ, ಎಚ್‌ಎಸ್‌ಆರ್‌ ಲೇಔಟ್‌ಗೆ ಸ್ಥಳಾಂತರಗೊಂಡಿದ್ದರು. ‘2010ರಲ್ಲಿ ಬಿಬಿಎಂಪಿ ಸಮೀಕ್ಷೆಗೆ ಬಂದಾಗಲೇ ಈ ಆಸ್ತಿ ಸಮಸ್ಯೆಯ ಸುಳಿಯೊಳಗೆ ಸಿಕ್ಕಿದೆ ಎಂಬುದು ಗೊತ್ತಿತ್ತುಎಂದು ಅವರು ಹೇಳುತ್ತಾರೆ.

ಹೈಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದು, ಬಿಬಿಎಂಪಿ ನನ್ನ ಮನೆಯನ್ನು ಒಡೆಯದಂತೆ ನೋಡಿಕೊಂಡಿದ್ದೆ. ಕಳೆದ ವರ್ಷ ಬಿಲ್ಡರ್‌ವೊಬ್ಬರು ನನ್ನ ಆಸ್ತಿಯನ್ನು ಖರೀದಿಸಲು ಮುಂದೆ ಬಂದರು. ರಾಜಕಾಲುವೆ ವಿವಾದ ಗೊತ್ತಿದ್ದರೂ ಅವರು ಮನೆ ಖರೀದಿ ಮಾಡುವುದಾಗಿ ಹೇಳಿದರು. ಖರೀದಿ ಪ್ರಕ್ರಿಯೆಗೆ ಮುನ್ನ ಅವರ ಅಪೇಕ್ಷೆಯಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತೆರವುಗೊಳಿಸಿದ ಆದೇಶವನ್ನೂ ತಂದಿದ್ದೆಎಂದು ಮೈಕೆಲ್‌ ವಿವರಿಸುತ್ತಾರೆ.

ಅಷ್ಟೊಂದು ಕೋಟಲೆಗಳಿರುವ ಈ ಆಸ್ತಿಯನ್ನು ಬಿಲ್ಡರ್‌ ಅಷ್ಟೇ ಆತ್ಮವಿಶ್ವಾಸದಿಂದ ಖರೀದಿಸಿದ್ದು ಏಕೆ? ಉತ್ತರ ಬಹಿರಂಗ ಗುಟ್ಟು. ಆ ಆಸ್ತಿಗೆ ಅಧಿಕೃತ ದಾಖಲೆ ಒದಗಿಸಿದರೆ ಹಾಕಿದ ದುಡ್ಡಿಗೆ ಎರಡರಷ್ಟು ಸಂಪಾದನೆ ಮಾಡಬಹುದು ಎಂಬ ಆಸೆಯೇ ಇಂತಹ ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s